ಚಲನಚಿತ್ರೋದ್ಯಮ, ಪೂರಕ ಸಂಸ್ಥೆಗಳು

	ಭಾರತದಲ್ಲಿ 1912-13ರಿಂದಲೂ ಕಥಾ (ಫೀಚರ್ ಫಿಲಂ) ಚಿತ್ರಗಳ ನಿರ್ಮಾಣವಾಗುತ್ತಿದೆ. ಆರ್.ಜಿ.ತೋರ್ನೆ ಮತ್ತು ಎನ್.ಜಿ. ಚಿತ್ರ ಅವರು ತಯಾರಿಸಿದ “ಪುಂಡಲೀಕೆ” ಆ ನಿಟ್ಟಿನಲ್ಲಿ ಪ್ರಥಮ ಪ್ರಯತ್ನ. ನಂತರ ದುಂಡಿರಾಜ್ ಗೋವಿಂದ್ ಪಾಲ್ಖೆ “ರಾಜಾಹರಿಶ್ಚಂದ್ರ” ಚಿತ್ರವನ್ನು ನಿರ್ಮಿಸಿ, ಭಾರತೀಯ ಚಲನಚಿತ್ರ ಇತಿಹಾಸದಲ್ಲಿ ಶಕಪುರುಷರೆನಿಸಿದರು. ದಾದಾ ಸಾಹೇಬ್ ಪಾಲ್ಛೆಯವರ ಹೆಸರಿನಲ್ಲಿ ಚಿತ್ರರಂಗದಲ್ಲಿನ ಅವಿಸ್ಮರಣೀಯ ಸೇವೆಗಾಗಿ ಭಾರತದಲ್ಲಿಯೇ ಅತ್ಯಂತ ಶ್ರೇಷ್ಠ ಪ್ರಶಸ್ತಿಯನ್ನು ನೀಡಲಾಗುತ್ತಿದೆ. ಈ ಪ್ರತಿಷ್ಠಿತ ಪ್ರಶಸ್ತಿಗೆ ಪಾತ್ರರಾದ ಕನ್ನಡ ಚಿತ್ರರಂಗದ ಏಕೈಕ ವ್ಯಕ್ತಿಯೆಂದರೆ ಕನ್ನಡದ ಮೇರು ನಟ ಡಾ|| ರಾಜಕುಮಾರ್. ಭಾರತದಲ್ಲಿ ಆರಂಭದಲ್ಲಿ ಮೂಕಿಯಾಗಿದ್ದ ಚಲನಚಿತ್ರರಂಗ ಆರ್ದೇಶಿಕ್ ಇರಾನಿಯವರ “ಆಲಂ ಆರಾ” ಚಿತ್ರದ ಮೂಲಕ ಮಾತಾಡುವ ಚಲನಚಿತ್ರವಾಯಿತು. ಅಂದಿನಿಂದಲೂ ಭಾರತವು ಫೀಚರ್ ಫಿಲಂಗಳ ವಾರ್ಷಿಕ ಉತ್ಪಾದನೆಯಲ್ಲಿ ವಿಶ್ವದಲ್ಲಿಯೇ ಪ್ರಮುಖ ಸ್ಥಾನದಲ್ಲಿದೆ.

	ಫಿಲಂಸ್ ಡಿವಿಜನ್: ಭಾರತ ಸರ್ಕಾರದ ವಾರ್ತಾ ಇಲಾಖೆಯಲ್ಲದೆ ಚಲನಚಿತ್ರ ವಿಭಾಗವೂ 1948ರಿಂದಲೂ ಕಾರ್ಯ ನಿರತವಾಗಿದೆ. ಸೆಲ್ಯೂಲಾಯ್ಡ್‍ನಲ್ಲಿನ ಸ್ವತಂತ್ರ ಭಾರತದ ಸಾಧನೆಗಳನ್ನು ಸಂಗ್ರಹಿಸಿಡುವುದಲ್ಲದೆ ಅವುಗಳನ್ನು ದಾಖಲಿಸಿ, ರಾಷ್ಟ್ರಾದ್ಯಂತ, ಪ್ರಸಾರ ಮಾಡುವುದು ಈ ಫಿಲಂ ಡಿವಿಷನ್‍ನ ಕರ್ತವ್ಯ. ಜನತೆ ಹಾಗೂ ಸರ್ಕಾರದ ಮಧ್ಯೆ ಸೇತುವಾಗಿ ಸಾಕ್ಷ್ಯಚಿತ್ರಗಳ ಆಂದೋಲನವನ್ನೇ ನಡೆಸಿರುವ ಈ ವಿಭಾಗವು ವಾರ್ತಾಚಿತ್ರಗಳು, ಸಾಕ್ಷ್ಯಚಿತ್ರಗಳು ಹಾಗೂ ಕಾರ್ಟೂನ್ (ಅನಿಮೇಷನ್) ಚಿತ್ರಗಳ ನಿರ್ಮಾಣ ಹಾಗೂ ವಿತರಣೆಯನ್ನು ಭಾರತಾದ್ಯಂತವಷ್ಟೇ ಅಲ್ಲ ವಿಶ್ವದ ವಿವಿಧ ಭಾಗಗಳಿಗೂ ಕೊಂಡೊಯ್ದಿದೆ. ಅಲ್ಲದೆ ಕಥೆಯಾಧಾರಿತ ಕಿರುಚಿತ್ರಗಳು, ಶೈಕ್ಷಣಿಕ ಚಿತ್ರಗಳನ್ನು ನಿರ್ಮಿಸುವುದಲ್ಲದೆ ಭಾರತ ಸರ್ಕಾರದ ಹಾಗೂ ರಾಜ್ಯ ಸರ್ಕಾರಗಳ ವಿವಿಧ ಸಚಿವಾಲಯಗಳಿಗಾಗಿಯೂ ರಾಷ್ಟ್ರದ ಪ್ರಗತಿಗೆ ಸಂಬಂಧಿಸಿದಂತೆ ಮಾಹಿತಿ ಚಿತ್ರಗಳನ್ನು ನಿರ್ಮಿಸಿ ಕೊಡುತ್ತಿದೆ. ಕಾರ್ಟೂನ್ ಫಿಲಂ ಯೂನಿಟ್ ಒಂದನ್ನು ಡಿಸ್ನಿ ಅನಿಮೇಷನ್ ಸ್ಟುಡಿಯೋ ಹಾದಿಯಲ್ಲಿ ಹೊಂದಿದ್ದು ರಂಜನೀಯ- ಶೈಕ್ಷಣಿಕ ಅನಿಮೇಷನ್ ಚಿತ್ರಗಳ ನಿರ್ಮಾಣದಲ್ಲಿಯೂ ತೊಡಗಿಕೊಂಡಿದೆ. ಆರೋಗ್ಯದಿಂದ ಹಿಡಿದು ಅಂತರಿಕ್ಷಯಾನದವರೆಗೆ  ಫಿಲಂ ಡಿವಿಷನ್ ಇದುವರೆಗೆ 7000ಕ್ಕೂ ಹೆಚ್ಚು ವಾರ್ತಾ ಚಿತ್ರಗಳನ್ನು ಸಾಕ್ಷ್ಯಚಿತ್ರಗಳನ್ನು ನಿರ್ಮಿಸಿದ ಅವುಗಳ ಅಡ ಮುದ್ರಿಕೆ; ಹಾಗೂ ವಿಡಿಯೋ ಕ್ಯಾಸೆಟ್ ರೂಪದಲ್ಲಿ ಶಾಲಾಕಾಲೇಜುಗಳಿಗೆ ಸಾರ್ವಜನಿಕರಿಗೆ ಲಭ್ಯವಿವೆ. ರಾಷ್ಟ್ರದ ಪ್ರತಿಯೊಂದು ಭಾಷೀಯರಿಗೂ ದೇಶದ ಸಮಸ್ಯೆಗಳೂ ಹಾಗೂ ಪರಿಹಾರೋಪಾಯಗಳನ್ನು ಕುರಿತಂತೆ ಸುಲಭವಾಗಿ ತಿಳಿಯಲು ಇಂಗ್ಲೀಷ್ ಹಾಗೂ ಹಿಂದಿ ಭಾಷೆಗಳಲ್ಲಿ ಮಾತ್ರವಲ್ಲದೆ ಆಯಾ ಪ್ರಾಂತೀಯ ಭಾಷೆಗಳಿಗೂ ತನ್ನ ಚಿತ್ರಗಳನ್ನು ಉಲಾಯಚ್ಚು (ಡಬ್) ಮಾಡಿಕೊಡುತ್ತಿದೆ. ರಾಷ್ಟ್ರದ ಅನೇಕ ಪ್ರಮುಖ ನಗರಗಳಲ್ಲಿ ತನ್ನ ಶಾಖಾ ಕಚೇರಿಯನ್ನು ಹೊಂದಿರುವ ಈ ವಿಭಾಗವು ಫಿಲಂ ಆರ್ಕೀವ್‍ಗಳನ್ನು ತೆರೆದಿದ್ದು ಅನೇಕ ಚಿತ್ರಗಳನ್ನು ಸಂಗ್ರಹಿಸಿಟ್ಟಿದೆ. ಸಾಕ್ಷ್ಯ, ಕಿರು ಹಾಗೂ ಅನಿಮೇಷನ್ ಚಿತ್ರಗಳಿಗಾಗಿ 1990ರಲ್ಲಿ ಅಂತರರಾಷ್ಟ್ರೀಯ ಚಿತ್ರೋತ್ಸವವನ್ನು ಆರಂಭಿಸಿದ್ದು ಪ್ರತಿ ಎರಡು ವರ್ಷಕ್ಕೊಮ್ಮೆ ಈ ಚಿತ್ರೋತ್ಸವ ನಡೆಸುತ್ತಿದೆ. “ಡಾ. ವಿ. ಶಾಂತಾರಾಂ ಪ್ರಶಸ್ತಿ”ಯನ್ನೂ ನೀಡುತ್ತಿದೆ.

ಸೆನ್ಸಾರ್ ಬೋರ್ಡ್!

	1952ರ ಸಿನಿಮಾಟೋಗ್ರಾಫ್ ಕಾಯ್ದೆ ಯಡಿ ರಚಿತವಾದ ಭಾರತದ ಕೇಂದ್ರ ಫಿಲಂ ಸೆನ್ಸಾರ್ ಬೋರ್ಡ್‍ನ್ನು “ಸೆಂಟ್ರಲ್ ಬೋರ್ಡ್ ಆಫ್ ಫಿಲಂ ಸರ್ಟಿಫಿಕೇಷನ್” ಎಂದು ಬದಲಾಯಿಸಲಾಯಿತು. ಭಾರತದಲ್ಲಿ ತಯಾರಾಗುವ ಯಾವುದೇ ಭಾಷೆಯ ಚಿತ್ರಗಳು ಆಯಾ ಪ್ರಾದೇಶಿಕ ಕಚೇರಿಯಲ್ಲಿ ಪರಿಶೀಲನೆಗೆ ಒಳಪಟ್ಟು ಪ್ರದರ್ಶನಾರ್ಹ ಸರ್ಟಿಫಿಕೇಟ್ ಪಡೆದ ನಂತರವೇ ಸಾರ್ವಜನಿಕವಾಗಿ ಚಲನಚಿತ್ರಮಂದಿರಗಳಲ್ಲಿ ಪ್ರದರ್ಶಿತವಾಗಬೇಕು. ಆಮದಾದ ವಿದೇಶೀ ಚಿತ್ರಗಳೂ ಭಾರತದಲ್ಲಿ ಸೆನ್ಸಾರ್ ಆದನಂತರವೇ ಪ್ರದರ್ಶಿತವಾಗಬೇಕು. ಈ ಮಂಡಳಿಯಲ್ಲಿ ಕೇಂದ್ರ ಸರ್ಕಾರದಿಂದ ನಿಯಮಿತರಾದ ಒಬ್ಬರು ಅಧ್ಯಕ್ಷ ಹಾಗೂ 12ರಿಂದ 26ರ ಒಳಗಿನ ಸಂಖ್ಯೆ ಅಧಿಕಾರೇತರ ಸದಸ್ಯರು ಇರುತ್ತಾರೆ. ಮುಂಬೈನಲ್ಲಿ ಕೇಂದ್ರ ಮಂಡಳಿ ಇದ್ದು, ಬೆಂಗಳೂರು, ಮುಂಬೈ, ಕೊಲ್ಕತ್ತ, ಹೈದರಾಬಾದ್, ಚೆನ್ನೈ, ತಿರುವನಂತಪುರಂ, ನವ ದೆಹಲಿ, ಕಟಕ್ ಹಾಗೂ ಗುವಾಹಟಿ-ಈ ಒಂಬತ್ತು ಸ್ಥಳಗಳಲ್ಲಿ ಪ್ರಾಂತೀಯ ಮಂಡಳಿಗಳು ಕಾರ್ಯ ಮಗ್ನವಾಗಿವೆ. ಭಾರತದಲ್ಲಿ 14 ಪ್ರಮುಖ ಭಾಷೆಗಳಲ್ಲಿ ಚಿತ್ರಗಳ ನಿರ್ಮಾಣವಾಗುತ್ತಿದ್ದು ಕೇವಲ 9 ಪ್ರಾಂತೀಯ ಮಂಡಳಿಗಳು ಸ್ಥಾಪಿತವಾಗಿರುವುದರಿಂದ ಗುಜರಾತಿ, ಪಂಜಾಬಿ, ರಾಜಾಸ್ಥಾನಿ ಮುಂತಾದ ಭಾಷಾ ಚಿತ್ರಗಳ ಪರಿಶೀಲನೆ ಮುಂಬೈನಲ್ಲಿ ನಡೆಯುತ್ತಿದೆ. ಶೈಕ್ಷಣಿಕ ತಜ್ಞರು, ಕಲಾವಿಮರ್ಶಕರು, ಪತ್ರಕರ್ತರು, ಸಮಾಜಸೇವಕರು, ಮನೋವಿಜ್ಞಾನ ತಜ್ಞರು, ಪ್ರಮುಖರುಗಳ ಸಲಹಾ ಸಮಿತಿಯ ಸಹಕಾರದೊಂದಿಗೆ ಪ್ರಾಂತೀಯ ಶಾಖಾ ಅಧಿಕಾರಿಗಳು ಕರ್ತವ್ಯ ನಿರ್ವಹಿಸುವರು. 1952ರ ಸಿನಿಮಾಟೋ ಗ್ರಾಪ್ ಆ್ಯಕ್ಟ್ ಹಾಗೂ 1983ರ ಸಿನಿಮಾಟೋಗ್ರಾಫ್ (ಸರ್ಟಿಫಿಕೇಷನ್) ರೂಲ್ಸ್ (ನಿಯಮಾವಳಿ). ಈ ಕಾಯ್ದೆಗಳಿಗನುಗುಣವಾಗಿ ಈ ಮಂಡಳಿ ಚಲನಚಿತ್ರಗಳ ಪ್ರದರ್ಶನಾರ್ಹತೆಯನ್ನು ನಿರ್ಧರಿಸುತ್ತವೆ. ಈ ಮಂಡಳಿಯ ನಿರ್ಧಾರವನ್ನು ಪ್ರಶ್ನಿಸಿ ಚಲನಚಿತ್ರ ನಿರ್ಮಾಪಕರು ಪುನ ವಿಮರ್ಶನ ಸಮಿತಿಯ ಮೊರೆಹೋಗಬಹುದು. ಅಲ್ಲಿಯೂ ಸಾಧ್ಯವಾಗದಿದ್ದರೆ ಹೊಸ ದೆಹಲಿಯಲ್ಲಿ 1984ರಲ್ಲಿ ಸ್ಥಾಪಿಸಲಾಗಿರುವ “ಫಿಲಂ ಸರ್ಟಿಫಿಕೇಷನ್ ಅಫೇಲೇಟ್ ಟ್ರಿಬ್ಯೂನಲ್”ನ ಮೊರೆಹೋಗಬಹುದಾಗಿದೆ.

ನ್ಯಾಷನಲ್ ಫಿಲಂ ಡೆವೆಲಪ್‍ಮೆಂಟ್ ಕಾರ್ಪೋರೇಷನ್ ಲಿ. : 
	ಮೊದಲು “ಫಿಲಂ ಫೈನಾನ್ಸ್ ಕಾಪೋರೇಷನ್” ಎಂಬ ಹೆಸರಿನಲ್ಲಿ ಕೇಂದ್ರ ಸರ್ಕಾರವು ಸ್ಥಾಪಿಸಿದ ನಿಗಮವು ಸದಭಿರುಚಿಯ ಉತ್ತಮ ಚಿತ್ರಗಳಿಗೆ (ಎಲ್ಲಾ ಭಾರತೀಯ ಭಾಷೆಗಳಿಗೂ) ಚಿತ್ರ ನಿರ್ಮಾಣಕ್ಕೆ ಆರ್ಥಿಕ ನೆರವು ನೀಡುತ್ತಿತ್ತು. (ಕನ್ನಡದಲ್ಲಿಯೂ ಎರಡು ಚಿತ್ರಗಳು ಈ ಎಫ್. ಎಫ್. ಸಿ ಯಿಂದ ಸಾಲ ಪಡೆದಿದ್ದವು). 1975ರಲ್ಲಿ ಎಫ್.ಎಫ್.ಸಿ.ಯನ್ನು ನ್ಯಾಷನಲ್ ಫಿಲಂ ಡೆವೆಲಪ್‍ಮೆಂಟ್ ಕಾರ್ಪೋರೇಷನ್ ಲಿಮಿಟೆಡ್ ಎಂದು ಬದಲಿಸಲಾಯಿತು. 1980ರಲ್ಲಿ ಭಾರತೀಯ ಚಲನಚಿತ್ರಗಳ ನಿರ್ಯಾತ ನಿಗಮ (ಇಂಪೆಕ್)ವನ್ನು ಎನ್.ಎಫ್.ಡಿ.ಸಿ.ಯೊಂದಿಗೆ ವಿಲೀನಗೊಳಿಸಲಾಯಿತು. ದೃಶ್ಯ ಶ್ರಾತ್ಯ ಮಾಧ್ಯಮ ಹಾಗೂ ಸಂಬಂಧಿಸಿದ ರಂಗಗಳಲ್ಲಿ ಕಲಾತಂತ್ರ ಜ್ಞಾನವನ್ನು ಅಭಿವೃದ್ಧಿ ಪಡಿಸುವುದರೊಂದಿಗೆ ಸಿನಿಮಾದಲ್ಲಿ ಶ್ರೇಷ್ಠತೆಯನ್ನು ಸಾಧಿಸುವ ಉದ್ದೇಶ ಹೊಂದಿದ ಎನ್.ಎಫ್.ಡಿ.ಸಿ. ಪ್ರಯೋಗಾತ್ಮಕ ಕಲಾತ್ಮಕ ಚಿತ್ರಗಳಿಗೆ ಆರ್ಥಿಕ ನೆರವು ನೀಡುವುದಲ್ಲದೆ, ತಾನೇ ಅಂತಹ ಚಿತ್ರಗಳ ನಿರ್ಮಾಣ ಪೂರ್ವ ಹಾಗೂ ನಿರ್ಮಾಣೋತ್ತರ ಆತ್ಯಾಧುನಿಕ ತಂತ್ರಜ್ಞಾನವನ್ನು ದೃಷ್ಟಿಯಲ್ಲಿಟ್ಟುಕೊಂಡು ಅಗತ್ಯ ಸೌಲಭ್ಯಗಳನ್ನು ಕಲ್ಪಿಸುವುದು ಮುಂತಾದ ಹಲವು ಹನ್ನೊಂದು ಕಾರ್ಯಚಟುವಟಿಕೆಗಳನ್ನು ಹಮ್ಮಿಕೊಂಡಿದೆ. ಅಲ್ಲದೆ ಫಿಲಂ ಸೊಸೈಟಿಗಳು, ರಾಷ್ಟ್ರೀಯ ಫಿಲಂ ಸರ್ಕಲ್‍ಗಳು ಹಾಗೂ ಭಾರತೀಯ ಮತ್ತು ವಿದೇಶಿ ಚಿತ್ರಗಳಿಗೆ ಸಂಬಂಧಿಸಿದ ಸಂಸ್ಥೆಗಳ ಸಹಯೋಗದಲ್ಲಿ ಚಲನಚಿತ್ರ ಸಪ್ತಾಹ, ಭಾರತೀಯ ಚಲನಚಿತ್ರ ಪನೋರಮಾ ಹಾಗೂ ಚಲನಚಿತ್ರೋತ್ಸವಗಳನ್ನು ಏರ್ಪಡಿಸುವ ಮೂಲಕ ನಾಡಿನ ಸಾಂಸ್ಕøತಿಕ ವೈಭವ ವೈವಿಧ್ಯವನ್ನು ಮರೆಸುವುದು ಈ ನಿಗಮದ ಗುರಿಯಾಗಿದೆ.

	ಅತ್ಯುನ್ನತ ಸಾಮಾಜಿಕ ಮೌಲ್ಯಗಳನ್ನುಳ್ಳ, ಉತ್ತಮ ಗುಣಮಟ್ಟದ ಅಲ್ಪ ವೆಚ್ಚದ ಚಿತ್ರಗಳ ಸೃಷ್ಟಿ ಯೋಜನೆಗೆ ನೆರವಾಗುವುದೂ ಎನ್.ಎಫ್.ಡಿ.ಸಿ.ಯ ಉದ್ದೇಶವಾಗಿದೆ. ಕೊಲ್ಕತ್ತದಲ್ಲಿ ಚಿತ್ರ ನಿರ್ಮಾಣ ಹಾಗೂ ನಿರ್ಮಾಣೋತ್ತರ ಸೌಲಭ್ಯಗಳನ್ನು ಹೊಂದಿದ 16 ಎಂ.ಎಂ. ಫಿಲಂ ಸೆಂಟರ್, ಪೂರ್ವ ಭಾಗದ್ಲಲಿ `ಧ್ವನಿ ಎಂಬ ವೀಡಿಯೋ ಸ್ಟುಡಿಯೋ ಹಾಗೂ ಮುಂಬೈನಲ್ಲಿ ಲೇಸರ್ ಸಬ್ ಟೈಟಲಿಂಗ್ ಯೂನಿಟ್‍ನ್ನು ಎನ್.ಎಫ್.ಡಿ.ಸಿ ಸ್ಥಾಪಿಸಿದ್ದು, ಚಲನಚಿತ್ರೋದ್ಯಮದ ಈ ಅಗತ್ಯಗಳನ್ನು ಪೂರೈಸುತ್ತಿದೆ. ಅಲ್ಲದೆ ಸಿನೇ ಆಟಿಸ್ಟ್ಸ್ ವೆಬ್‍ಫೇರ್ ಪಂಡ್ ಆಫ್ ಇಂಡಿಯಾ ಸಂಸ್ಥೆಯನ್ನೂ ಸ್ಥಾಪಿಸಿದ್ದು ಪೆನ್‍ಷನ್ ಹಾಗೂ ಆರ್ಥಿಕ ಸಹಾಯವನ್ನು ಚಲನಚಿತ್ರ ಕಲಾವಿದರಿಗೆ ನೀಡುತ್ತಿದೆ.

ಡೈರೆಕ್ಟೋರೇಟ್ ಆಫ್ ಫಿಲಂ ಫೆಸ್ಟಿವಲ್:	
	ಭಾರತದಲ್ಲಿ ಚಲನಚಿತ್ರೋತ್ಸವಗಳನ್ನು ಅಂತರರಾಷ್ಟ್ರೀಯ ಪುಟದಲ್ಲಿ ವ್ಯವಸ್ಥೆ ಮಾಡಲು, ಆ ಮೂಲಕ ಉತ್ತಮ ಚಿತ್ರಗಳನ್ನು ಪ್ರೋತ್ಸಾಹಿಸಲು 1973ರಲ್ಲಿ ಸ್ಥಾಪಿತವಾದ ಸಂಸ್ಥೆ “ಡೈರೆಕ್ಟೋರೇಟ್ ಆಫ್ ಫಿಲಂ ಫೆಸ್ಟಿವಲ್”. ಈ ಡೈರೆಕ್ಟೋರೇಟ್ ಪ್ರತಿವರ್ಷ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳನ್ನು ಭಾರತೀಯ ಚಿತ್ರರಂಗದ ಅತ್ಯುತ್ತಮರಿಗೆ ನೀಡುವ ಮೂಲಕ ಉತ್ತಮ ಚಿತ್ರಗಳಿಗೆ ಒಂದು ವೇದಿಕೆಯನ್ನು ಒದಗಿಸಿದೆ. ಅಂತರರಾಷ್ಟ್ರೀಯ ಮಟ್ಟದಲ್ಲಿ ಪರಸ್ಪರ ಸಾಂಸ್ಕøತಿಕ ವಿನಿಮಯ ಹಾಗು ಗೆಳೆತನ ವೃದ್ಧಿಯಾಗಲು ಈ ಡೈರೆಕ್ಟೋರೇಟ್ ಶ್ರಮಿಸುತ್ತಿದೆ. ಚಲನಚಿತ್ರೋತ್ಸವಗಳಲ್ಲಿ ಏಶಿಯನ್ ಸ್ಪರ್ಧಾತಮಕ ಚಿತ್ರಗಳು ವಿಶ್ವದ ಸಿನಿಮಾ, ಸಿನಿಮಾ ಮತ್ತು ಸಾಹಿತ್ಯ ವಿಭಾಗಗಳೊಂದಿಗೆ ಭಾರತೀಯ ಚಿತ್ರ ವಿಭಾಗವೂ ಇದ್ದು, ಟೆಕ್ನಿಕಲ್ ರೆಟ್ರಾಸ್ಪಕ್ಟಿವ್ ಹೊಸದಾಗಿ ಸೇರ್ಪಡೆಯಾಗಿದೆ. ದೇಶ ವಿದೇಶಗಳ ಚಿತ್ರಗಳ ಪ್ರದರ್ಶನವೇರ್ಪಡಿಸಿ ಪರಸ್ಪರ ಅರಿವು ಮೂಡಿಸುವ ಪ್ರಯತ್ನ ಈ ಚಿತ್ರೋತ್ಸವದ ಹಿನ್ನೆಲೆಯಲ್ಲಿದೆ.

ಚಲನಚಿತ್ರಗಳ ರಾಷ್ಟ್ರೀಯ ಭಂಡಾರ:
	ಭಾರತದ ರಾಷ್ಟ್ರೀಯ ಚಲನಚಿತ್ರ ಭಂಡಾರವು 1964ರಲ್ಲಿ ಸ್ಥಾಪನೆಯಾತಿತು. ಕೇಂದ್ರ ಸರ್ಕಾರದ ವಾರ್ತೆ ಮತ್ತು ಪ್ರಸಾರ ಸಚಿವಾಲಯದಡಿಯಲ್ಲಿ ಮಾಧ್ಯಮ ಯೂನಿಟ್ ಆಗಿ ಸ್ಥಾಪನೆಗೊಂಡ ಈ ಫಿಲಂ ಆರ್ಕೀವ್‍ನ ಮುಖ್ಯ ಉದ್ದೇಶ ಭಾರತೀಯ ಸಿನಿಮಾ ಪರಂಪರೆಯನ್ನು ರಕ್ಷಿಸಿಡುವುದು ಹಾಗೂ ನಾಡಿನಲ್ಲಿ ಆರೋಗ್ಯಕರ ಸಿನಿಮಾ ಸಂಸ್ಕøತಿಯನ್ನು ಬೆಳೆಸುವ ಕೇಂದ್ರವಾಗಿರುವುದೇ ಆಗಿದೆ. ಸಿನಿಮಾದ ವಿವಿಧ ಆಯಾಮಗಳಲ್ಲಿ ಸಂಶೋಧನೆ ನಡೆಸುವುದಲ್ಲದೇ ವಿದ್ಯಾರ್ಥಿವೇತನ ಒದಗಿಸುವುದೂ ಇದರ ಗುರಿಯಾಗಿದೆ. ಎಲ್ಲಕ್ಕಿಂತ ಮಿಗಿಲಾಗಿ ವಿಶ್ವದ ಎಲ್ಲೆಡೆಯ ಪ್ರೇಕ್ಷಕರ ಬಳಿಗೇ ಭಾರತೀಯ ಸಿನಿಮಾವನ್ನು ಒಯ್ಯುವ ಗುರುತರ ಹೊಣೆಯೂ ಈ ಸಂಸ್ಥೆಯದಾಗಿದೆ. `ಇಂಟರ್‍ನ್ಯಾಷನಲ್ ಫೆಡರೇಷನ್ ಆಫ್ ಫಿಲಂ ಆರ್ಕೀವ್ಸ್‍ನ ಸದಸ್ಯತ್ವ ಪಡೆದಿರುವ ಈ ಸಂಸ್ಥೆಯು ಅತ್ಯುತ್ತಮ ಭಾರತೀಯ ಚಿತ್ರಗಳ ಭಂಡಾರವಷ್ಟೇ ಆಗಿರದೆ, ಚಲನಚಿತ್ರಗಳಿಗೆ ಸಂಬಂಧಿಸಿದ ಛಾಯಾಚಿತ್ರಗಳು, ಹಾಡಿನ ಪುಸ್ತಕಗಳು, ಭಿತ್ತಿ ಪತ್ರಗಳು, ಕರಪತ್ರಗಳು ಮತ್ತಿತರ ಪ್ರಚಾರ ಸಾಮಗ್ರಿಗಳನ್ನು ಸಂಗ್ರಹಿಸಿಟ್ಟು ದಾಖಲಿಸುವ ಕರ್ತವ್ಯವೂ ಈ ಸಂಸ್ಥೆಯದು. ಬೆಂಗಳೂರಲ್ಲದ ರಾಷ್ಟ್ರದ ಒಂಬತ್ತು ಪ್ರಮುಖ ನಗರಗಳಲ್ಲಿ ಈ ಸಂಸ್ಥೆಯ ಕೇಂದ್ರಗಳಿವೆ. ಫಿಲಂ ಸೊಸೈಟಿಗಳು, ಶೈಕ್ಷಣಿಕ ಸಂಸ್ಥೆಗಳು ಹಾಗೂ ಸಾಂಸ್ಕøತಿಕ ಸಂಘಗಳಿಗೆ ದೇಶ-ವಿದೇಶಗಳ ಚಿತ್ರಗಳನ್ನು ವಿತರಿಸಿ ಪ್ರದರ್ಶನವೇರ್ಪಡಿಸುವ ಮೂಲಕ ಜಾಗತಿಕ ಸಿನಿಮಾದ ಮೌಲ್ಯ ದರ್ಶನ ಮೂಡಿಸುವ ಈ ಸಂಸ್ಥೆ ನಾಲ್ಕು ವಾರಗಳವಧಿಯ ವಾರ್ಷಿಕ ಫಿಲಂ ಚಲನಚಿತ್ರ ರಸಗ್ರಾಹಣ ಶಿಬಿರಗಳನ್ನು ಪುಣೆಯಲ್ಲಿ, ಅಲ್ಲಿನ ಫಿಲಂ ಅಂಡ್ ಟೆಲಿವಿಷನ್ ಇನ್‍ಸ್ಟಿಟ್ಯೂಟ್‍ನ ಸಹಯೋಗದಲ್ಲಿ ಏರ್ಪಡಿಸುವ ಮೂಲಕ ಸಿನಿಮಾ ಜಾಗೃತಿ ಮೂಡಿಸುವಲ್ಲಿ ಮುಖ್ಯ ಪಾತ್ರವಹಿಸಿದೆ.

ಮಕ್ಕಳ ಚಿತ್ರ ಸಮಾಜ :
	1955ರಲ್ಲಿ ಸ್ಥಾಪನೆಯಾದ ನ್ಯಾಷನಲ್ ಸೆಂಟರ್ ಆಫ್ ಫಿಲಂಸ್ ಫಾರ್ ಚಿಲ್ಡ್ರನ್ ಅಂಡ್ ಯಂಗ್ ಪೀಪಲ್ (ಎನ್.ಸಿ.ವೈಪಿ) ಯೇ ನಂತರದಲ್ಲಿ ಮಕ್ಕಳ ಚಿತ್ರ ಸಮಾಜ (ಚಿಲ್ಡ್ರನ್ಸ್ ಫಿಲಂ ಸೊಸೈಟಿ-ಸಿ.ಎಫ್.ಎಸ್.ಐ) ಆಗಿ ಪರಿವರ್ತನೆಗೊಂಡಿತು. ಮಕ್ಕಳಿಗೆ ಮೌಲ್ಯಾಧಾರಿತ ಮನರಂಜನೆಯನ್ನು ಚಲನಚಿತ್ರ ಮಾಧ್ಯಮದ ಮೂಲಕ ಒದಗಿಸುವುದೇ ಈ ಸಂಸ್ಥೆಯ ಮುಖ್ಯ ಉದ್ದೇಶ ಮುಂಬೈನಲ್ಲಿ ಮುಖ್ಯ ಕಚೇರಿಯನ್ನು ಹೊಂದಿರುವ ಈ ಸಂಸ್ಥೆಯ ಶಾಖೆಗಳು ಹೊಸ ದೆಹಲಿ ಹಾಗೂ ಚೆನ್ನೈಗಳಲ್ಲಿ ಶಾಖಾ ಕಚೇರಿಗಳನ್ನು ಹೊಂದಿದ್ದು, ಮಕ್ಕಳಿಗಾಗಿ ಚಲನಚಿತ್ರಗಳ ನಿರ್ಮಾಣ, ವಿತರಣೆ, ಪ್ರದರ್ಶನಗಳನ್ನು ನಾಡಿನಾದ್ಯಂತ ಮಕ್ಕಳ ಚಿತ್ರೋತ್ಸವಗಳನ್ನು ಏರ್ಪಡಿಸುವ ಮೂಲಕ ನಡೆಸಿಕೊಂಡು ಬರುತ್ತಿದೆ. ಈ ಸಂಸ್ಥೆಯು ತನ್ನ ಚಿತ್ರಗಳನ್ನು ವೀಡಿಯೋ ಕ್ಯಾಸೆಟ್‍ಗಳ ರೂಪದಲ್ಲಿಯೂ, ಅಡಕ ಮುದ್ರಿಕೆಗಳ ರೂಪದಲ್ಲಿಯೂ ಪೂರೈಸುತ್ತಿದೆ. ವಿವಿಧ ಕಿರುತೆರೆ ಚಾನೆಲ್‍ಗಳ ಮುಖಂತರಷ್ಟೆ ಪ್ರದರ್ಶಿಸುತ್ತಿದೆ. ಅಲ್ಲದೆ, ಹಲವಾರು ರಾಷ್ಟ್ರೀಯ ಹಾಗು ಅಂತರರಾಷ್ಟ್ರೀಯ ಚಿತ್ರೋತ್ಸವಗಳಲ್ಲಿಯೂ ಭಾಗವಹಿಸುತ್ತಿರುವ ಈ ಸಂಸ್ಥೆಯು ಹಲವಾರು ಬಹುಮಾನಗಳನ್ನೂ ತನ್ನದನ್ನಾಗಿಸಿಕೊಂಡ ಹಿರಿಮೆಯನ್ನು ಹೊಂದಿದೆ. ಮಕ್ಕಳ ಚಲನಚಿತ್ರಗಳನ್ನು ಕುರಿತ ವಿಚಾರ ಸಂಕೀರ್ಣವನ್ನು ಏರ್ಪಡಿಸುವುದು, ಶಾಲಾ ಮಕ್ಕಳಿಗಾಗಿ ರಸಪ್ರಶ್ನೆ ಕಾರ್ಯಕ್ರಮ ವ್ಯವಸ್ಥೆ ಮಾಡುವುದು ಹಾಗೂ ಹವ್ಯಾಸಿ ಬಾನುಲಿ ಪ್ರಸಾರ ಪ್ರಶಿಕ್ಷಣ ಮಕ್ಕಳ ಚಲನಚಿತ್ರ ನಿರ್ಮಾಣ, ಅನಿಮೇಷನ್ ತಂತ್ರ ಕುರಿತಂತೆ ಕಾರ್ಯಾಗಾರಗಳನ್ನು ಏರ್ಪಡಿಸುವುದು ಮುಂತಾದವು ಭಾರತೀಯ ಮಕ್ಕಳ ಚಿತ್ರ ಸಮಾಜದ ಇತರೆ ಕಾರ್ಯ ಚಟುವಟಿಕೆಗಳು.
												(ಶ್ರೀಕೃಪಾ)
ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ